ವಿಯನ್ನ ಕಾಂಗ್ರೆಸ್
 	1814-15. ಯುರೋಪಿನ ಇತಿಹಾಸದಲ್ಲಿಯೇ ಅತಿ ದೊಡ್ಡ ಅಂತಾರಾಷ್ಟ್ರೀಯ ಮತ್ತು ರಾಜತಾಂತ್ರಿಕ ಸಮ್ಮೇಳನ. ನೆಪೋಲಿಯನ್ನನ ಪತನಾನಂತರ ಯುರೋಪಿನ ರೂಪುರೇಷೆಗಳನ್ನು ರಚಿಸಲು ನಡೆದ ಯುರೋಪಿನ ರಾಜಕಾರಣಿಗಳ ಸಮಾಲೋಚನಾಸಭೆ 1814 ಸೆಪ್ಟೆಂಬರ್ ನಿಂದ 1815ರ ಜೂನ್ ತನಕ ನಡೆಯಿತು. ಅದರ ನೇತೃತ್ವವನ್ನು ಆಸ್ಟ್ರಿಯದ ಛಾನ್ಸೆಲರ್ ಮೆಟರ್ನಿಕ್ ವಹಿಸಿದ್ದ. ತುರ್ಕಿ ಬಿಟ್ಟು ಉಳಿದೆಲ್ಲ ರಾಷ್ಟ್ರಗಳು ಈ ಸಮ್ಮೇಳನದಲ್ಲಿ  ಪಾಲ್ಗೊಂಡವು.

	ಫ್ರಾನ್ಸ್ ದೇಶದಲ್ಲಿ ಬೋರ್ಬನ್ ಮನೆತನದ ಆಳ್ವಿಕೆಯನ್ನು ಪುನಃ ಸ್ಥಾಪಿಸಲಾಯಿತು. 18ನೆಯ ಲೂಯಿ ಫ್ರಾನ್ಸ್ ದೇಶದ ರಾಜನಾದ. ನೆಪೋಲಿಯನ್ ಪದಚ್ಯುತಗೊಳಿಸಿದ್ದ ರಾಜರನ್ನು ಪುನಃ ಅವರವರ ರಾಜ್ಯಗಳಲ್ಲಿ ನೆಲೆಗೊಳಿಸಬೇಕೆಂಬ ತತ್ತ್ವವನ್ನು ಅಂಗೀಕರಿಸಲಾಯಿತು. ಪೀಡ್‍ಮಾಂಟ್ ದೇಶಕ್ಕೆ ಜಿನೀವವನ್ನು ಸೇರಿಸಿ ಪೀಡ್‍ಮಾಂಟ್ ರಾಜನನ್ನು ಅಧಿಕಾರಕ್ಕೆ ತರಲಾಯಿತು. ಅದುವರೆಗೆ ಆಸ್ಟ್ರಿಯಕ್ಕೆ ಸೇರಿದ ಬೆಲ್ಜಿಯಂ ದೇಶವನ್ನು ಹಾಲೆಂಡಿಗೆ ಸೇರಿಸಿ ಆರೆಂಜ್ ಮನೆತನವನ್ನು ಹಾಲೆಂಡ್‍ನಲ್ಲಿ ಪುನಃ ಸ್ಥಾಪಿಸಲಾಯಿತು. ರಷ್ಯಕ್ಕೆ ವಾರ್ಸ ಪ್ರಾಂತದ ಬಹುಭಾಗ, ಫಿನ್ಲೆಂಡ್ ಮತ್ತು ಬೆಸರೇಬಿಯ ಪ್ರದೇಶಗಳನ್ನು ಕೊಡಲಾಯಿತು. ವಾರ್ಸದ ಪೋಸೆನ್ ಪ್ರಾಂತ್ಯ ಸಾಕ್ಸೆನಿಯ ಮೂರನೆಯ ಎರಡು ಭಾಗ, ರೈನ್ ನದಿಯ ಪೂರ್ವದ ಕಡೆಯ ಪ್ರದೇಶ ಮತ್ತು ಪೊಮೆರೇನಿಯಗಳನ್ನು ಪ್ರಷ್ಯ ಪಡೆಯಿತು. ಆಸ್ಟ್ರಿಯ ಹಲವು ಪೋಲಿಷ್ ಪ್ರದೇಶಗಳನ್ನೂ ಉತ್ತರ ಇಟಲಿಯ ಲಂಬಾರ್ಡಿ ಮತ್ತು ವೆನಿಷಿಯ ಏಡ್ರಿಯಾಟಿಕ್ ಸಮುದ್ರದ ಪರ್ವತತೀರಪ್ರದೇಶ ಮತ್ತು ಟಿರೋಲ್ ಮತ್ತು ಸಾಲ್ಸ್‍ಬರ್ಗ್‍ಗಳನ್ನು ಪಡೆಯಿತು. ಇಂಗ್ಲೆಂಡ್ ಉತ್ತರ ಸಮುದ್ರದಲ್ಲಿ ಹೆಲೆಗೊಲೆಂಡ್ ಮೆಡಿಟರೇನಿಯನ್ ಸಮುದ್ರದಲ್ಲಿ ಮಾಲ್ಟ ಮತ್ತು ಅಯೋನಿಯನ್ ದ್ವೀಪಗಳು, ದಕ್ಷಿಣ ಆಫ್ರಿಕದಲ್ಲಿ ಕೇಪ್ ಕಾಲೋನಿ ಮತ್ತು ಸಿಲೋನ್, ಟೊಬ್ಯಾಗೊ, ಟ್ರಿನಿಡಾಡ್‍ಗಳನ್ನು ವಶಪಡಿಸಿಕೊಂಡಿತು. ಫಾರ್ಮ ಪ್ರದೇಶವನ್ನು ನೆಪೋಲಿಯನ್ನನ ಪತ್ನಿ ಮೇರಿ ಲೂಯಿಗೆ ಕೊಡಲಾಯಿತು. ಮಾಡೆನ್ ಮತ್ತು ಟಸ್‍ಕನಿ ರಾಜರನ್ನು ಅವರವರ ಸ್ಥಾನದಲ್ಲಿ ಸ್ಥಿರಗೊಳಿಸಲಾಯಿತು. ಇಟಲಿಯನ್ನು ಆಸ್ಟ್ರಿಯದ ಕೋರಿಕೆಯಂತೆ ಅನೇಕ ಸ್ವತಂತ್ರ ರಾಜ್ಯಗಳಾಗಿ ವಿಂಗಡಿಸಲಾಯಿತು. ಡೆನ್‍ಮಾರ್ಕಿನಿಂದ ನಾರ್ವೆಯನ್ನು ಬೇರ್ಪಡಿಸಿ ಸ್ವೀಡನ್‍ಗೆ ಸೇರಿಸಲಾಯಿತು. 

	ವಿಯನ್ನ ಕಾಂಗ್ರೆಸ್‍ನಲ್ಲಿ ಭಾಗವಹಿಸಿದ್ದ ಪ್ರಮುಖ ನಾಯಕರೆಂದರೆ ಆಸ್ಟ್ರಿಯದ ಛಾನ್ಸಲರ್ ಪ್ರಿನ್ಸ್ ಮೆಟರ್ನಿಕ್, ಫ್ರಾನ್ಸಿನ ಟ್ಯಾಲಿರ್ಯಾಂಡ್, ಇಂಗ್ಲೆಂಡಿನ ವಿದೇಶಾಂಗ ಮಂತ್ರಿ ಲಾರ್ಡ್‍ಕ್ಯಾಸಲ್‍ರಿಂಗ್, ರಷ್ಯದ ಒಂದನೆಯ eóÁರ್ ಅಲೆಗ್ಸಾಂಡರ್, ಆಸ್ಟ್ರಿಯದ ಒಂದನೆಯ ಫ್ರಾನ್ಸಿಸ್, ಪ್ರಷ್ಯದ ಮೂರನೆಯ ಫ್ರೆಡರಿಕ್ ವಿಲಿಯಂ. ಇವರಲ್ಲದೆ ಬವೇರಿಯ, ಏರ್ಟಿಂಬರ್ಗ್ ಡೆನ್ಮಾರ್ಕ್ ಮತ್ತಿತರ ಸಣ್ಣಪುಟ್ಟ ಅರಸರೂ ರಾಜಕಾರಣ ನಿಪುಣರೂ ಪ್ರತಿಭಾನ್ವಿತರೂ ಭಾಗವಹಿಸಿದ್ದರು.

	ಈ ಕಾಂಗ್ರೆಸ್‍ನಲ್ಲಿ ಯಾವ ಪ್ರಜಾಪ್ರಭುತ್ವ ತತ್ತ್ವವನ್ನೂ ಅನುಸರಿಸ ಲಿಲ್ಲ. ಪ್ರಜೆಗಳ ಅಭಿಲಾಷೆಯನ್ನು ಕೇಳದೆ ಪ್ರದೇಶಗಳನ್ನು ತಮಗೆ ತೋಚಿದಂತೆ ಹಂಚಿದರು. ಈ ಕಾಂಗ್ರೆಸ್‍ನಲ್ಲಿ ಭಾಗವಹಿಸಿದ್ದವರ ಪ್ರಧಾನ ಉದ್ದೇಶ ಶಕ್ತಿಸಮತೋಲನದ ಸ್ಥಾಪನೆ. ಈ ಕಾರಣದಿಂದಾಗಿ ಈ ಕಾಂಗ್ರೆಸ್ಸಿನ ಕೆಲಸ ಶಾಶ್ವತವಾಗಿ ಉಳಿಯಲಿಲ್ಲ.			
	 		   (ಎ.ವಿ.ವಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ